ಇಜ್ಮಿರ್-
ತುರ್ಕಿಯ ಪ್ರಮುಖ ಪಟ್ಟಣಗಳಲ್ಲಿ ಒಂದು ಹಾಗೂ ರೇವು ಪಟ್ಟಣ. ಸ್ಮರ್ನ ಎಂಬ ಹೆಸರೂ ಇದೆ. 15 ಮೈಲಿ ಉದ್ದವಿರುವ ಇಜ್ಮಿರ್ ಖಾರಿಯ ಕೊನೆಯಲ್ಲಿ, ಈಜಿಯನ್ ಸಮುದ್ರ ತೀರದ ಪಶ್ಚಿಮ ಭಾಗದ ಮಧ್ಯದಲ್ಲಿ ಇದೆ. ಈ ಖಾರಿ ಹಾಗೂ ಪಟ್ಟಣ ದೊಡ್ಡ ದೊಡ್ಡ ಬೆಟ್ಟಗಳ ಸಾಲುಗಳಿಂದ ಆವೃತವಾಗಿವೆ. ಪೂರ್ವದಿಂದ ಹರಿದು ಬರುವ ಮೂರು ಪ್ರವಾಹಗಳು ಈ ಖಾರಿಗೆ ಬೀಳುತ್ತವೆ. ಇಲ್ಲಿ ಸ್ವಾಭಾವಿಕ ಮೆಡಿಟರೇನಿಯನ್ ಸಸ್ಯವರ್ಗವಿದೆ. ಜನಸಂಖ್ಯೆ ಸು. 3 ಲಕ್ಷ.		(ಎಂ.ಎಸ್.)

ಹೋಮರ್ ಮಹಾಕವಿಯ ಜನ್ಮಸ್ಥಳವೆಂದು ಹೇಳುವ ಪಟ್ಟಣಗಳಲ್ಲಿ ಇದೂ ಒಂದಾಗಿದೆ. ಅಯೋನಿಯನ್ ವಸಾಹತುಗಳಲ್ಲಿ ಒಂದಾದ ಇಜ್ಮಿರ್ ಕ್ರಿ.ಪೂ. 688ರಲ್ಲಿ ಅಯೋನಿಯನ್ ಒಕ್ಕೂಟಕ್ಕೆ ಸೇರಿತು. ಅನಂತರ ಇದು ಲಿಡಿಯಾದ ದೊರೆಯ ವಶಕ್ಕೆ ಬಂದಮೇಲೆ ಏಷ್ಯಾದ ಏಳು ಅತ್ಯುತ್ತಮ ನಗರಗಳಲ್ಲಿ ಒಂದು ಎನ್ನಿಸಿಕೊಂಡಿತು. ಇಜ್ಮಿರ್ ಕ್ರಿ.ಶ. 178ರಲ್ಲಿ ಭೂಕಂಪಕ್ಕೆ ಒಳಗಾಗಿ ನಾಶವಾಯಿತು. ಆದರೆ ಮಾರ್ಕಸ್ ಆರೇಲಿಯಸ್‍ನ ಕಾಲದಲ್ಲಿ ಮತ್ತೆ ಈ ನಗರವನ್ನು ಕಟ್ಟಲಾಯಿತು. ಕ್ರಿ.ಶ. 1402ರಿಂದ ಇತ್ತೀಚಿನವರೆಗೂ ಇದು ತುರುಕರ ವಶದಲ್ಲಿತ್ತು. 1923ರಲ್ಲಿ ಇದು ಸಂಪೂರ್ಣವಾಗಿ ತುರಕರ ಆಧಿಪತ್ಯಕ್ಕೆ ಒಳಗಾದ ಮೇಲೆ ತುರ್ಕಿಯಲ್ಲಿದ್ದ ಗ್ರೀಕರು ಗ್ರೀಸಿಗೂ ಗ್ರೀಸ್‍ನಲ್ಲಿದ್ದ ತುರುಕರು ತುರ್ಕಿಗೂ ವರ್ಗಾವಣೆಯಾದರು. ಆದರೆ ಕುಶಲ ಶಿಲ್ಪಿಗಳು, ನೇಕಾರರು, ಕಾರ್ಖಾನೆಗಳ ಒಡೆಯರು-ಇವರುಗಳಲ್ಲಿ ಬಹುಪಾಲು ಗ್ರೀಕರೇ ಆಗಿದ್ದುದರಿಂದ ಇಜ್ಮಿರ್ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು; ಮತ್ತೆ ಎರಡನೆಯ ಮಹಾಯುದ್ಧದ ಹೊತ್ತಿಗೆ ಜಾಗತಿಕ ಪ್ರಶಸ್ತಿ ಗಳಿಸಿತು. 

ಇಜ್ಮಿರ್ ಜಿಲ್ಲೆ ವ್ಯವಸಾಯ, ಗಣಿಕೆಲಸ, ಕೈಗಾರಿಕೆಗಳು, ಹಡಗಿನ ಉದ್ಯಮಗಳಿಗೆ ಪ್ರಸಿದ್ಧಿ ಪಡೆದಿದೆ. ಆಲಿವ್ ಮರಗಳು, ದ್ರಾಕ್ಷಿ, ಖರ್ಜೂರ, ಬಾದಾಮಿ, ಹೊಗೆಸೊಪ್ಪು, ಗೋಧಿ, ಬಾರ್ಲಿ, ಹತ್ತಿ ಮುಂತಾದವು ಪ್ರಮುಖ ಬೆಳೆಗಳು. ಜೇನುಸಾಕಣೆಗೂ ಇದು ಪ್ರಸಿದ್ಧ. ಹಂದಿ ಮಾಂಸದ ರಫ್ತಿಗೂ ಹಡಗು ನಿರ್ಮಾಣಕಾರ್ಯಕ್ಕೂ ಹೆಸರು ಪಡೆದಿದೆ. ಇಜ್ಮಿರ್ ಜಮಖಾನೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. 

ನ್ಯಾಟೋ ಒಪ್ಪಂದದಂತೆ ಆಗ್ನೇಯ ಯೂರೋಪಿನ ಸೈನಿಕ ಠಾಣೆ ಇಲ್ಲಿದೆ. ಅನೇಕ ವಿಮಾನಮಾರ್ಗ ಕೇಂದ್ರಗಳಿದ್ದು, ಉತ್ತಮವಾದ ರೈಲ್ವೆ ಸಂಪರ್ಕವಿದೆ. ಈ ಪಟ್ಟಣಕ್ಕೆ ಸ್ವಾಭಾವಿಕ ಬಂದರಿನ ಉತ್ತಮ ಅನುಕೂಲತೆಯಿದ್ದರು ಇಸ್ತಾನ್ ಬುಲ್‍ನಂಥ ರೇವು ಸೌಲಭ್ಯಗಳಿಲ್ಲ.												   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ